ಪ್ರಿಯರೇ,
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ ಒಂದು ತುಣುಕು ನಾಳೆಯಿಂದ ನಿಮ್ಮ ಕಣ್ಣಿಗೆ ಕಾಣಿಸಲಿದೆ.
ದೊಡ್ಡ ಯೋಚನೆಯೊಂದರ ಕಾಲುದಾರಿ.
ಎತ್ತರದ ಹೂವೊಂದರ ಸಣ್ಣ ಪರಿಮಳ
ಒಂದು ಪುಟ್ಟ ಹೆಜ್ಜೆ
ಇಂದು ನಡುರಾತ್ರಿಗೆ ಮೊದಲೇ ಆ ಹೂವಿನ ಹೆಸರಿನ ವಿಳಾಸ ತಿಳಿಸುತ್ತೇನೆ.
ನಡುರಾತ್ರಿಯ ನಂತರ ನೀವು ಆ ಹೂವನ್ನ ಕಾಣುವಿರಿ.
ಕಳೆಯುತ್ತಿರುವ ವರ್ಷದ ಕಡೆಯ ಗಳಿಗೆಗಳು..
ಹೊಸ ವರ್ಷದ ಹೊಸ ನಿಮಿಷಗಳು..
ಕಾಯುತ್ತೀರಾ?
-ಅಬ್ದುಲ್ ರಶೀದ್.
ಈವತ್ತು ಊರಲ್ಲಿ ದೊಡ್ಡ ಪೆರುನಾಳ್ ಅಂದರೆ ಬಕ್ರೀದ್. ಅಮ್ಮ ಕರೆದಿದ್ದಾರೆ. ಎಂದಿನಂತೆ ಹೋಗಲಾಗದೆ ಕೂತಿದ್ದೇನೆ.ನನಗೆ ಯಾವಾಗಲೂ ಹೀಗೆಯೇ .ಅಲ್ಲಿ ಹೋಗಲಾರೆ.ಇಲ್ಲಿ ಇರಲಾರೆ. ಕವಿತೆ ಬೇಕಾದರೆ ಬರೆಯಬಲ್ಲೆ! ಸುಮಾರು ೨೨ ವರ್ಷಗಳ ಹಿಂದೆ  ಹಬ್ಬಕ್ಕೆ ಹೋಗದೆ ಕಳ್ಳ ಕೆಲಸಗಳ ನಡುವೆ ಬರೆದ ಕವಿತೆಯನ್ನು ಇಲ್ಲಿ ಪೋಸ್ಟ್ ಮಾಡುತ್ತಿರುವೆ.
ಹಜ್‌ಹಬ್ಬದ ನೆನಪು....
ಸಣ್ಣಗೊಮ್ಮೆ ಹಿಡಿದ ಜಡಿ ಜರ್ರೋಮಳೆ
ಬಾಳೆಯೆಲೆ ಮೇಲೆ ಹಜ್ಜಿಯಬ್ಬದ ಹನಿ
ಬತ್ತಲು ಬಚ್ಚಲ ಮಾಡಿನಿಂದಿಳಿದ ಮೋಡ ಬಿಸಿಲುಕೋಲು
ಹಬೆದುಂಬಿ ಮೈಮಿರುಗಿ ಹಜ್ಜಿಯಬ್ಬದ
ನೀರು ಸೋಕುವಲ್ಲೆಲ್ಲ ಉಮ್ಮಗುನುಗುನಿಸಿ
ಪೆರುನಾಳಿನ ಹಾಡು.
ಬೆನ್ನೊರಸಿ ಉಡಿದಾರಕ್ಕೆ
ಮುಂಡುಡಿಸಿ, ಕಿವಿ ಎಳೆದು ಬೈತಲೆಯಲ್ಲಿ
ಬೆರಳಿರಿಸಿ ಪಾವಲಿ ಉಡಿತುಂಬಿ,
ಅತ್ತರು ಪೂಸಿ ಕಿವಿಯಲ್ಲಿ ಊದಿ, ದಾರಂದದ
ಮುಂದೆ ತಂಗಿ 'ಅಲೀಮಾ' ಚಾಚಿ ಕೈಚಾಚಿ
ಕೈಯೆಲ್ಲ ಮದರಂಗಿ ಕೆಂಪು ಹಕ್ಕಿ, ಕಿವಿಯೆಲ್ಲ ಬೆಳ್ಳಿ
ಎಸಳೆಲ್ಲ ಝಮಕಿ,ಅಂಗಳದ ಹಸಿಮಣ್ಣ ಮೇಲೆ ಧುಮುಕಿ.
ಬಿಳಿ ಮಲ್ಲಿಗೆಯ ಮಾಲೆ ಮುಡಿಯ ಮೇಲೆ.
ಹುಡುಗ ಕಾಡೊಳಗೆ ಅಲ್ಲಾಕರೆದಂತೆ ಪಳ್ಳಿಗೆ
ಬಾಪಾನ ಹಿಂದೆ, 'ಅಲ್ಲಾಹು ಅಕ್‌ಬರ್'
ಕಾಡೊಳಗೆ ಕರೆದಂತೆ, ಹನಿಯೊಳಗೆ ಕರೆದಂತೆ
ಕಾಡಿನೊಳಗಡೆ ಕರೆದಂತೆ ಮಗನ ಅಲ್ಲಾನ ಕಡೆಗೆ
ಅಲ್ಲಿ ಮರಳು ಗಾಡಿನ 'ಕಹಬಾ'ದ
ಅತ್ತಕಡೆ ಇಬ್ರಾಹಿಂ ನೆಬಿ ಮಗ ಇಸ್‌ಮಾಯೀಲನ
ಕೊರಳ ಅಲ್ಲಾಹನಿಗೆ ಕೋಯ್ದು ಕೊಡುವಂತೆ,
ದಿಕರಿಡುತ್ತವೆ ಕಿವಿಯ ಒಳಗೆ ಕಾಡನಡುವೆ.
ಉಮ್ಮನ ಪಾವಲಿ ಮುಂಡುಡಿಯಲ್ಲಿ ಕಣ್ಣ ತಬ್ಬುತ್ತದೆ.
ಕರಿದ ನೇಂದ್ರ ಕಾಯಿ ನಾಲಗೆಯಪ್ಪುತ್ತದೆ
ಸುಯ್ಯೋಹನಿಯಲ್ಲಿ ಕಿವಿದುಂಬುತ್ತದೆ, ಮರದ ಹನಿಕಣ್ಣು
ತಂಗಿಯ ಕಿವಿಯ ಬೆಳ್ಳಿ ತೊಟ್ಟಿಕ್ಕುತ್ತದೆ. ಬಾಪಾನ ಹಿಂದೆ
ಅಲ್ಲಾನ ಕಡೆಗೆ.
ಇರುವುದೊಂದೇ ಬಾಪಾ, ಹಿಂಬಾಲಿಸಲಿಕ್ಕಿರುವುದೊಂದೇ ಬಾಪಾ
ಈ ಇಷ್ಟು ಮಳೆಯ ಕಾಡಿನಲ್ಲಿ ಹನಿವ ಹನಿಯೆಲ್ಲ
ಬಾಪಾ ಕರೆದಂತೆ, ನೆಲವೆಲ್ಲ ಪಸೆಯಿಡಿದು ಜಾರುಜಾರಿಗೆ
ದೂರ ಸರಿದಂತೆ ಬಾಪಾ ಕಾಲುರೋಡಿನೊಳಗೆ
ಅಲ್ಲಾನ ಕಡೆಗೆ.
ಹರಿದ ತೊರೆ ಅಡಿಕೆ ಪಾಲದ ಮೇಲೆ ಬಾಪಾ
ನಡೆದಂತೆ ನಡುಗುತ್ತಾ ಹುಡುಗ,
ನಡುಗುತ್ತ ಅಡಿಗಡಿಗೆ ಅಲ್ಲಾನ ಕರೆಯುತ್ತ ಹುಡುಗ.
ಕಣ್ಣ ಅಗಲಕ್ಕೆಲ್ಲ ಅಲ್ಲಾ, ನದಿ ಹರಿದಂತೆ ಕೆಳಗೆ
ಅಲ್ಲಾ, ಆಕಾಶವೆಲ್ಲ ಕರಿದುಂಬಿ ಹರಿದಂತೆ
ಅಲ್ಲಾ, ಮರದಮರದ ತೊಗಟಿ ಕರಿಗಟ್ಟಿ ಬೇರು
ಪೊದೆಯೆಲ್ಲ ನೀರು ಮುಂಡು ತೊಯ್ಸಿಸಿಕೊಂಡು
ನಡೆವ ಹುಡುಗನೆದೆಯಲ್ಲೆಲ್ಲ ಅಲ್ಲಾನ ಕಡೆಗೆ ನಡೆವ ಬಾಪಾ.
ಹರಿವ ತೊರೆದಾಟಿ ಮುಳಿ ಹುಲ್ಲ ನೆಲದಲ್ಲಿ
ಕಾಲೊಸರುವಲ್ಲೆಲ್ಲಾ ಅಕ್ಕಿ ಹಿಟ್ಟಿನ ಮೇಲೆ
ನಾದಿದಂತೆ ಅಲ್ಲಾನ ಹೆಜ್ಜೆ.
ಪಳ್ಳಿಯ ಪಡಿಯೇರಿದ
ಮೇಲೆ ಬಾಪಾ ಅಲ್ಲಾನ ಮುಂದೆ 'ಅಲ್ಲಾಹು ಅಕ್‌ಬರ್'
ಹುಡುಗ ನುಡಿ ತುಂಬಿ ಹರಿವ ಪಾವಲಿಯಲ್ಲೆಲ್ಲ
ಉಮ್ಮ ಅಳುವಂತೆ ಪಳಿಯಿಂದೆಲ್ಲಿಂದಲೋ ಅಲ್ಲಾ
ಕರೆದಂತೆ 'ಕಹಬಾ'ದ ಕಡೆಗೆ, ಕಾಡಿನಲ್ಲೆಲ್ಲೋ
ಬಾಪಾ ಪುಟ್ಟ ಹುಡುಗನ ಬಿಟ್ಟು ನಡೆದಂತೆ ಎಲ್ಲೋ
'ಅಲ್ಲಾಹು ಅಕ್‌ಬರ್'.
-೧-
ನೀರೊಳಗೆ ತಿರುಗುತ್ತಿದೆ ನೀರ ಗಾಲಿ,
ತಾರೆ ತಿರುಗುತ್ತಿದೆ ಚಂದ್ರನೊಡನೆ.
ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ
ಇಷ್ಟೊಂದು ಬೆಳಕು ಇಲ್ಲಿ !
-೨-
ನೀನೇನೆಂದು ನೀನು ನುಡಿದೆ,
ನಾನೇನೆಂದು ನಾನೂ.
ನಿನ್ನ ಚಲನೆ ನನ್ನ ಮಿದುಳೊಳಗೆ,
ಏನೋ ತಿರುಗುತ್ತಿದೆ ಒಳಗೆ.
ಇಡಲಾಗುತ್ತಿಲ್ಲ ಹೆಸರ,
ತಿರುಗುತ್ತಿದೆ ಅದು ಅಷ್ಟು
ಚಂದದಲ್ಲಿ.
-೩-
ಚಲಿಸು ನಡುವಿನೊಳಕ್ಕೆ,
ಸುತ್ತು ಭುವಿಯಂತೆ,ಚಂದ್ರನೂ ಸುತ್ತು.
ಸುತ್ತುವವು ಅವು ಅವುಗಳ ಒಲವಿನಂತೆ.
ಸುತ್ತು ತೊಡಗುವುದು ನಡುವಿನಿಂದಲೇ.
-೪-
ಈ ಇರುಳು ನಿನ್ನ ಗೂಡ ಸುತ್ತ  ಸುತ್ತುತ್ತಿರುವೆ,
ತಿರುತಿರುಗಿ ಬೆಳಕು ಹರಿವವರೆಗೆ.
ಗಾಳಿ ತಣ್ಣಗೆ ಆಗ ಅರಹುತ್ತದೆ,
ಅವನು ಮಧುಬಟ್ಟಲ ಎತ್ತುತ್ತಾನೆ,
ಅದು ಯಾರದೋ ತಲೆಯ ಬುರುಡೆ.
-೫-
ನಡೆ ನಿಲ್ಲದೆ, ಇರದಿದ್ದರೂ ತಲುಪಲು ಎಡೆ.
ಕಲಿ ಗಮನಿಸದಿರಲು ದೂರವನ್ನು..
ಅದು ನಮಗಿರುವುದಲ್ಲ, ಚಲಿಸು ಒಳಗಡೆಗೇ,
ಚಲಿಸದಿರು ಭಯ ದೂಡುವ ಕಡೆಗೆ.
-೬-
ಈ ಹೊತ್ತು ಈ ಒಲವು ಬಂತು ನನ್ನೊಳಗೆ ಇರಲು,
ಹಲವು ಇರವುಗಳು ಈ ಒಂದರೊಳಗೆ.
ಅಕ್ಕಿಯ ಕಾಳಲ್ಲಿ  ಭತ್ತದ ಸಾವಿರ ಕಂತೆ,
ಸೂಜಿಯ ಕಣ್ಣಲ್ಲಿ ತಾರೆಗಳು ಕತ್ತಲೆ ತೆರೆ.
-೭-
ಅರಿಯದೊಂದು ಚಲಿಸುತ್ತಿದೆ ನಮ್ಮೊಳಗೆ,
ಅದು ಚಲಿಸುತ್ತಿದೆ ಈ ವ್ಯೋಮವನ್ನೇ,
ತಲೆಗೆ ಅರಿವಾಗದೆ ಪಾದ,
ಪಾದವರಿಯದೆ ಶಿರ-
ಬೇಕೂ ಇಲ್ಲ ಅವುಗಳಿಗೆ ಇದೆಲ್ಲ
ಸುಮ್ಮನೆ ಚಲಿಸುತ್ತಿದೆ.
-೮-
ಕೆಲವೊಮ್ಮೆ ಇರುಳು ಬೆಳಕವರೆಗೆ ಎದ್ದಿರುತ್ತದೆ;
ಚಂದ್ರ, ಸೂರ್ಯ ಬರುವವರೆಗೆ.
ನೀ ಬಾವಿಯ ಕತ್ತಲ ತಳದ ಕೊಡಪಾನ-
ಕಾಣುವೆ ಬೆಳಕು- ಜಗ್ಗಿದರೆ.
-೯-
ಇಷ್ಟು ಸಣ್ಣವ ನಾನು ತೀರಾ ಕಾಣಿಸದವನು
ಹೇಗೆ ಬಂತು ಇಷ್ಟೊಂದು ಪ್ರೀತಿ ನನ್ನ ಒಳಕ್ಕೆ?
ನೋಡು ನಿನ್ನ ಕಣ್ಣುಗಳು ಎಷ್ಟೊಂದು ಕಿರಿದು
ಕಾಣುವುದಲ್ಲ ಆದರೂ ಅಗಾಧವನು.
-೧೦-
ಏನೋ ನಮ್ಮ ರೆಕ್ಕೆಗಳ ಬಿಚ್ಚುವುದು, ಏನೋ ಈ
ನೀರಸವ,ಬೇಸರವ ಪರಿಹರಿಸುವುದು.
ಯಾರೋ ಎದುರಿನ ಈ ಮಧು ಬಟ್ಟಲ ತುಂಬಿಸುವರು
ನಾಲಗೆ ಕೇವಲ ದೈವದ ರುಚಿಯ ಅರಿಯುವುದು.
-೧೧-
ಬದುಕುವುದು ಭ್ರಾಂತಿಯ ತುಟಿಯ ತುದಿಯಲ್ಲಿ
ಕಾರಣಗಳ ಕಾಣಬೇಕೆಂದೆಣಿಸಿ.
ಕದವ ತಟ್ಟುತ್ತೇನೆ. ಅದು ತೆರೆಯುತ್ತದೆ.
ತಟ್ಟುತ್ತಿದ್ದೆ ಇಷ್ಟೂ ಹೊತ್ತು ಒಳಗಿನಿಂದಲೇ!
-೧೨-
ಕುಣಿ-ಮುರಿದಾಗ,
ಕುಣಿ-ಗಾಯ ತೆರಕೊಂಡಾಗ,
ಕುಣಿ-ಬಡಿದಾಟದ ನಡುವೆ,
ಕುಣಿ-ನಿನ್ನದೇ ನೆತ್ತರಲ್ಲಿ,
ಕುಣಿ-ಇಲ್ಲದಾದಾಗ.
ಅವಳು
ಚಂದವಿದ್ದಳು ಗೆಳೆಯ ಅವಳು
ಒಳ್ಳೆ ಮಜಬೂತು ಕುದುರೆ.
ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು
ಬಿಟ್ಟಾಗ ನಗುವ ನಕ್ಷತ್ರ ಮೀನು.
ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ
ಕಚ್ಚಿ ಹೇರುಪಿನ್ನು, ನಗುವ ಹಾಗೆ
ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,
ತುಂಬು ಕೊರಳಿನ ತುಂಬ ಕಾಡು ಹಾಡು.
ಅವಳ ತಟ್ಟನೆಯ ತಿರುವು ತಿರುವುತ್ತ
ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ
ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ
ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ
ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.
[ಮೌಲಾನಾ ಜಲಾಲುದ್ದೀನ್ ರೂಮಿ ಬದುಕಿದ್ದರೆ ಅವರಿಗೆ ನಾಳೆ ಭಾನುವಾರಕ್ಕೆ ಎಂಟುನೂರು ವರ್ಷಗಳಾಗುತ್ತಿತ್ತು.ರೂಮಿಯ ಕುರಿತು, ಅವರ ಹುಟ್ಟೂರಿನ ಕುರಿತು, ಈಗ ಆ ಊರು ಹೇಗಿದೆ ಎಂಬುದರ ಕುರಿತು ನೀವು ಬಿ.ಬಿ.ಸಿ ಯ ಈ ತಾಣವನ್ನು ನೋಡಬಹುದು .]
-೧-
ಅರಿಯದ ಪ್ರೇಮಕ್ಕಿಂತ ಮಿಗಿಲಿನ ಪ್ರೇಮವಿಲ್ಲ
ಗುರಿಯಿರದ ಕೆಲಸಕ್ಕಿಂತ ಘನದ ಕಾರ್ಯವಿಲ್ಲ
ನಿನ್ನೆಲ್ಲ ಜಾಣತನ ಬಿಟ್ಟುಬಿಡಬಲ್ಲೆಯಾದರೆ
ಅದಕು ಮಿಗಿಲಿನ ತಂತ್ರ ಬೇರೆಯಿಲ್ಲ!
-೨-
ಕುಡುಕರಿಗೆ ಪೋಲೀಸರ ಹೆದರಿಕೆ,
ಆದರೆ ಪೋಲೀಸರೂ ಕುಡುಕರೇ..
ಪ್ರೀತಿಸುತ್ತಾರೆ ಊರ ಮಂದಿ ಇವರಿಬ್ಬರನ್ನೂ,
ಪ್ರೀತಿಸುವಂತೆ ಪಗಡೆಯ ಕಾಯಿಗಳನ್ನು.
-೩-
ಪ್ರೇಮದ ಕಟುಕನಂಗಡಿಯಲ್ಲಿ ಕೊಲ್ಲುವುದು
ಒಳ್ಳೆಯದನ್ನೇ. ಬಡಕಲು ಮಿಕಗಳನ್ನಲ್ಲ.
ಓಡದಿರು ಈ ಮರಣದಿಂದ,
ಕೊಲ್ಲದೇ ಬದುಕಿ ಉಳಿದವರು
ಎಂದೋ ಸತ್ತು ಹೋದವರು
ಮತ್ತೇ ಬರುವೆನು ಹೆಣ್ಣೇ..
ನಿನ್ನ ರಬ್ಬರಿನ ಹಾಲು ಬಸಿಯುವ ಕೈ ತುಂಬಮೊಲಾಂಜಿ ಚಿತ್ತು ಚಿತ್ತಾರ, ನಿನ್ನ ಲೇಸಿನೊಳಗಡೆಗಂಮೆನ್ನುವ ಕಾಡನಾರ ಬೇರ ತೈಲ,ನಿನ್ನ ಕಾಲುಂದುಗೆಯ ನೆಲವ ಕದಿವ ಬೆರಳತುದಿಯ ಉಗುರ, ಜಿಲ್ಲೆನ್ನುವ ಮಣ್ಣ ನೊರೆ ನೀರ,ಕೊಂಕುವ ಕೊರಳ ಬೆಳ್ಳಿ ಅಲಿಕತ್ತುಗಳ ಹುಡುಗೀ ;ನಾ ಬರುವೆ ಬೆಳ್ಳಿಯ ದಿನವೊಂದು ಸಂಜೆಇನ್ನೂ ಸಂಜೆಯಾಗದ ಹೊತ್ತು.
ರಪರಪ ಮುಂಗಾರು ಹನಿನಾಚಿ, ಚಿಗುರುಮೊರೆವ ಕಲ್ಲಾಳ ಜಲಪಾತ ಹಳ್ಳ ತುಂಬಾಬೆಳ್ಳಿ ಚಿಮ್ಮುವ ಮೀನು, ಕೆಂಪು ಕೆಂಪೋ ಮಣ್ಣು,ಮೋಡ ನೀರಾಗಿ ಕರಗಿ ದುಮುಕಿ ದುಮ್ಮುಕ್ಕಿ,ನಿನ್ನ ಬೀಡಿನ ಹುಲ್ಲು ಮಾಡಿನ ಮೇಲೆಲ್ಲಾ ಹನಿಗರಿತೊಟ್ಟ ನಿನ್ನ ಕಣ್ಣಿನ ಪಾಪೆ ಯಾವ ಪಾಪಿಯುಈಜದ ಕಡಲು, ಕೆನ್ನೆ ಗುಳಿ ಕರೆವ ಕಣ್ಣಿನ ಧಿಗಿಲುನಾ ಬರುವೆ ಹೆಣ್ಣೇ ನಿನ್ನ ಚಿವುಟಲಿಕ್ಕೆ
ನಿನ್ನ ದಂಡೆಯ ಬಿಸಿ ಹೊಯ್ಗೆ ಸುರಿವ ಹನಿಯೆಲ್ಲಹಬೆಯೋ ಹಬೆ, ಹನಿ ಮುತ್ತು ಬೆವರ ಹನಿಗಟ್ಟಿಹೊಳೆವ ಕಣ್ಣು. ನಿನ್ನ ಬಾಳೆ ಮೀನಿನೆದೆ ಮಿಡಿವಎಳೆ ಎದೆಯ ಬಡಿತ, ಒಡಲ ಕೆಳಗಿನ ಒಡಲರೋಮ ರೋಮಾಂಚನ. ಬಿರಿವ ಬೆರಗಿನ ತುಂಬನಿನ್ನ ಕದಿರಿನ ಕಾವು ಕಾವೇರಿ ಹರಿದು,ಯಾವ ನೋವಿನ ಕಾವ್ಯ ಕೊಡದ ಕಂಬನಿ ಖುಷಿಯ,ನಿನ್ನ ಕಲ್ಲಾಳ ಮಲೆ ಏರು ತಗ್ಗು, ಗೇರು ಹಣ್ಣಿನ ಸಿಹಿಯಸೇಂದಿಯ ಸಿರಿಯ ಹೀರಬರುವೆಹೆಣ್ಣೆ, ನಾನು ಬರುವೆ.
ಅರ್ಥಕುಪ್ಪಾಯ: ರವಿಕೆಯಂತಹ ಅಂಗಿಮುಂಡು ತುಣಿ: ತುಂಡು ಸೀರೆಮೈಲಾಂಜಿ: ಮದರಂಗಿಲೇಸ್ : ತಲೆ ಬಟ್ಟೆಅಲಿಕತ್ : ಕಿವಿ ಆಭರಣ
ನನ್ನ ತೋಳುಗಳಲ್ಲಿ
ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು
ಸೆರೆಯಾಗಿದೆ ಓ ದೇವತೆಯೇ...
ನನ್ನ ತುಟಿಯ ನಡುವಿಂದ ಮುತ್ತುಗಳ ನಡುನಡುವೆ
ಪ್ರೀತಿಮಾತುಗಳು ಸೆಲೆಯೊಡೆಯುತ್ತಿವೆ.
ನನ್ನ ಬಿಗಿ ಅಪ್ಪುಗೆಯಿಂದ  ಮಾತಿಲ್ಲದೆಯೆ
ನಿನ್ನ ತೆಳ್ಳಗಿನ ದೇಹ ಸರಿಯುತ್ತಿದೆ ದೂರ
ಸಂಶಯದೊಂದು ಸಣ್ಣ ನಡುವಿನ ಹುಡುಗೀ..
ನೀ ಕೊಂಕು ಮಾತಾಡುತಿರುವೆ.
ಮೋಸದ ನೋವಿನ ಸಾಲುಮಾತುಗಳು ನೆನಪಾಗುತಿದೆ
ನಿನಗೆ. ಸುಮ್ಮನೆ ಕೇಳಿಸಿಕೊಳ್ಳುತಿರುವೆ
ಏನೂ ಕೇಳಿಸದೆಯೇ..
ಶಪಿಸುತ್ತಿರುವೆ ನನ್ನ ಹುಮ್ಮಸ್ಸಿಗೆ ನಾನೇ
ನನ್ನ ನಯದ ಲಲ್ಲೆಯಾಟಗಳಿಗೆ,
ಯೌವನಕ್ಕೆ, ನಿತ್ಯ ಬೇಟಗಳಿಗೆ,
ಹೂತೋಟದ ಸದ್ದಿಲ್ಲದ ಆಟಗಳಿಗೆ
ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ.
ಶಪಿಸುತ್ತಿರುವೆ ಕವಿತೆಗಳ ಮಾಂತ್ರಿಕ ಮೋಡಿಗಳಿಗೆ,
ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,
ಅವರ ಕಣ್ಣೀರಿಗೆ, ಕಾಲ ಮೀರಿದ  ವಿಷಾದಗಳಿಗೆ.
ಆಗ ರೇಡಿಯೋ ಇರಲಿಲ್ಲ . ಅದರ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು.
ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,
ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,
ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ
ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ  ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.
ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .
ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ.
ಅವರ ಸದ್ದು, ಆಕಾರ, ರೇಡಿಯೋ ಪೆಟ್ಟಿಗೆ ಯಂತಿರುವ ಅವರ ನೆನಪುಗಳು
ಎಲ್ಲ ಕೇಳಿಸುತ್ತಿದೆ.. ಅವರ ಕೈ ಹಿಡಿದು ಕೊಳ್ಳಲು ಸಿಗುತ್ತಿಲ್ಲ.
ಆಗ `ಆ' ಹೇಗೆ  `ಹಾ' ಹೇಗೆ
`ಕ' ಹೇಗೆ `ಖ' ಹೇಗೆ ಹೇಳಲಾಗದೆ ಪಂಡಿತರು ಒದೆಯುತ್ತಿದ್ದರು.
ಪಂಡಿತರ ಹೆಂಡತಿ ಭಾಗವತರ ಜೊತೆ ಊರು ಬಿಟ್ಟಾಗ
ಅವರ ಒದೆತಕ್ಕೆ ಕಾರಣ ಗೊತ್ತಾಗಿ ಅವರ ಮುಖ ನೋಡಿ ಅಳು ಬಂದಿತ್ತು.
ಈಗ ಒಮ್ಮೊಮ್ಮೆ `ಅ' ಮತ್ತು `ಹ' ಕೆಟ್ಟು ಹೋದಾಗ ಸಣ್ಣಗೆ ಖುಷಿಯಾಗುತ್ತದೆ .
ಪಂಡಿತರ ಓದು, ಭಾಗವತರ ಹಾಡು ಮತ್ತು ಓಡಿಹೋದವಳ ನೆಲೆಯಿಲ್ಲದ ಪ್ರಣಯ!
ಯಾವ ದನಿಯೂ ಕೇಳಿಸದೆ ಸುಮ್ಮನೆ ಮುಖ ನೋಡುತ್ತ ನಿಂತು ಬಿಡುತ್ತೇನೆ.
ಓಡಿಹೋಗುವ ಖುಷಿ ಇನ್ನೆಲ್ಲಿದೆ ಅನಿಸುತ್ತದೆ.
ರೇಡಿಯೋ ಮಾತನಾಡುತ್ತಿರುತ್ತದೆ.. .. .. ..
ಕಣ್ಣುತುಂಬುತ್ತದೆ ಮತ್ತು ಎಂತಹದೋ ಮಂದಹಾಸ!
ಸಣ್ಣದಿರುವಾಗ ಖಾಲಿ ರೇಡಿಯೋ ಪೆಟ್ಟಿಗೆಯೊಳಕ್ಕೆ
ಕೈ ಎಟುಕುವುದು ಯಾವಾಗ..ಕಾಲುಗಳು..ಕೈಗಳು..ಬೆರಳುಗಳು
ಬೆಳೆದು ದೊಡ್ಡದಾಗುವುದು ಯಾವಾಗ ಎಂದು ಅಪ್ಪನನ್ನು ನೋಡಿ
ನೊಂದುಕೊಳ್ಳುತ್ತಿದುದು ನೆನಪಾಗುತ್ತಿದೆ.
ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ....
ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ ಎಲೆಯ ಮರೆಯಲ್ಲಿಡು
ಅದನು ನನಗೇ ತಿರುಗಿಸಿಕೊಡು.
ನಿದ್ದೆಯಿಂದೆದ್ದು ಆಕಳಿಸುತ ನಿಂತ ಕಾಮದೇವತೆ
ಮಗು ನೀನು. ಎಚ್ಚರಿಸಿ ಮೆಲ್ಲಗೇ ಕಾಲು ಕೆದರಿ
ಕಾಮಿಸಲು ಕರೆದೊಯ್ಯಬಂದೆ ನಾನು
ಸಂಜೆಗಣ್ಣಲ್ಲೇ ರಾತ್ರಿಯೇಕಾಂತ ಬೆಳಗೆ ನೀನೊಬ್ಬಳೇ.
ಎದ್ದ ಕಣ್ಣಿಗೆ ಕನ್ನಡಿಯಲ್ಲಿ ನೀನೊಬ್ಬಳೇ.
ನಾನು ದಿಕ್ಕಿಲ್ಲ ದೆಸೆಯಿಲ್ಲದೆಯೆ ಹಗಲೆಲ್ಲ ತತ್ತರಿಸಿ
ನಿನ್ನ ಕಾಲಲ್ಲಿ ಕಣ್ಣಿಟ್ಟು ಬುದಕ ಬಂದವನು,
ಎಲ್ಲಿಗೋ ಹೋಗುವೆನು ನಿನ್ನೊಬ್ಬಳನ್ನೇ ಬಿಟ್ಟು.
ನೀ ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ
ಹೂವ ಒಳಗೆ ಇಡು ಹುಡಿಯಾಗಿ ಧೂಳು ಸೇರುವುದು.
ನನಗೆ ಭಯ. ಹೀಗೆ ನಿನ್ನ ಕಣ್ಣಲಿ ಹೆದರಿಕೆ ನಾನು.
ನನಗೆ ಭಯ. ನಾಳೆ ನಾನಿಗಿಲ್ಲದ ಬೆಳಗು ನಿನ್ನ ಕಣ್ಣಲ್ಲಿ ಭಯ.
ಸಂಜೆಯಲ್ಲೋ ಹೂ ಉದುರಿದ ನೆಲದ ಹಳದಿಯ
ಮೇಲೆ ನಿನ್ನ ಕಣ್ಣ ಹೂ ನೆಟ್ಟು
ನನ್ನ ದಾಹ ಮಲಗದೇ ಬಿಡದು ನಾಳೆಯೆಲ್ಲ ಮರೆತು.
ನಿನ್ನ ಮೈ ಉದ್ದವನ್ನೆಲ್ಲ ಬಳಸಿ ಮಾತಾಡುವುದು,
ನಾಲಗೆ ಕಿವಿ ಕಣ್ಣ ಮುಚ್ಚುವುದು, ತೆರೆದ ಕಣ್ಣಿಗೆ ಆಕಾಶ ಮರೆಸುವುದು,
ಉದ್ದಕ್ಕೂ ಮೇಲೆ ಹರಡಿದ ನಿನ್ನ ಕಣ್ಣಲ್ಲೆಲ್ಲ ಭಯ
ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ ನೆಲದಲ್ಲಿ,
ಹೂವು ಮುಚ್ಚುವುದು ಬೆಳಗೆ ಮಂಜ ಸೇರವುದು.
ನಾನು ಹುಚ್ಚು ಹುಚ್ಚಾ ಬಟ್ಟೆ ಹುಡುಗ.
ನಿನ್ನ ಕಣ್ಣುದ್ದ ಭಯ ಓಡುವುದ ನೋಡಿ ನಗು ತತ್ತರಿಸಿ ನಿಂತು
ನೆಲ ನೋಡುವುದು. ತಲೆಯೆತ್ತಿ ನಿನ್ನ ಅಳು
ನೆಲಕ್ಕೆ ಬೀಳುವುದ ತಡೆದು ನನ್ನ ಕಣ್ಣಗಲ ತೊಯ್ಯುವುದು.
ಎದೆ ತುಂಬಿ ಭಯ ಬಾಯಿಗೆ ಬಂದು ಕಿವಿತುಂಬ
ಓಡುವುದು ಮುಡಿಯಲ್ಲಿ ಬೆರಳು. ಕಣ್ಣು ಮುಚ್ಚುವುದು
ನಿನ್ನ ತುಟಿ ತುಂಬಿ ಮಾತು.
ನಿಂತಲ್ಲೇ ಭಯ ಮೆಲ್ಲಗೇ ಹರಿದು ತೊಟ್ಟು ತೊಟ್ಟು
ಗೊತ್ತಾಗದೇ ಗಾಳಿಯಾಡುವುದು ಹೆದರಿ ಹೆದರಿ.
ಹುದುಗಿಸಿಡು ಇದನು ಎದೆಯ ಮೇಲೆಲ್ಲಾದರೂ
ಉಸಿರು ಸೇರುವುದು.
ನಾಳೆಯೆಲ್ಲಾದರೂ ಬೆಳಗು ಬರುವುದು ಮಂಜುಗೂಡಿ
ಬೆಳಗಿಗೂ ಮೊದಲೇ ನಿನ್ನ ಕೂಡೆ ತೊಯ್ಯುವ ಹೂವು
ಮುಖ ಮುಚ್ಚಿ ಬೆಳಗೇ ಅಳುವುದು ಬೆಳಗಿಗೆ.
ಬರುವುದು ಬೆಳಗು ಮುಖ ಮುಚ್ಚಿ ಕಂಡೊಡನೆ ಮೆಲ್ಲಗೇ ನಗುವುದು
ಕಣ್ಣ ಮುಚ್ಚಿ ನೋಡಲಾಗದ ಹಾಗೆ ನಿನ್ನ ಕಾಡುವುದು.
ಹುಚ್ಚು ಹುಚ್ಚೇ ಬರುವ ಅಳು
ನಿನ್ನ ಕಾಲಿಗೆ ಮುತ್ತಿ ಮುಖ ಎತ್ತಿ ನಗುವುದು
ಹೂ ಮೇಲೆ ನಲಿದಾಡುವುದು ನಗು.
ನಿನ್ನ ನಿಲಲಾಗದ ಕಣ್ಣ ಭಯ ಭಯದಲ್ಲೇ ನಿಂತು
ನಗುವುದು. ಎಂದೂ ಹೋಗದ ಹಾಗೆ ಆಡುವುದು
ಇಲ್ಲೆ ಎಲ್ಲಾದರೂ ಹುದುಗಿಸಿಡು ಭಯವ
ಸಂಜೆ ಬರುವುದು
ಹೆಂಗಸರ ಹುಚ್ಚು , ಭಗವಂತ ಮತ್ತು ನಾನು
ಈ ಹೆಂಗಸರ ಮಧ ಇಂದು ಅತಿರೇಕಕ್ಕೆ ಹೋಗಿದೆ,
ಇವರ ಆರ್ತ ಕೂಗು ಭಕ್ತಿಯಂತೆ ಕೇಳಿಸುತ್ತಿದೆ.
ಮಲಗಿರುವ ಮಕ್ಕಳು ಕನಸಿಂದ ದಿಗ್ಗನೆ ಎದ್ದು ,ಬೆಳಕಲ್ಲಿ ಕಣ್ಣು ಕಾಣಿಸದೆ
ಕಕ್ಕಾವಿಕ್ಕಿಯಾಗಿ, ಹಾಗೇ ನೆಲದ ತಂಪಿಗೆ ಕೆನ್ನೆ ಒತ್ತಿ, ಭೂಮಿಯೊಳಗಣ ಸದ್ದ ಆಲಿಸುವ
ಆಟ ಆಡುತ್ತಿದ್ದಾರೆ. ಈ ಹೆಂಗಸರ  ಸಂಕಟ ಆಧ್ಯಾತ್ಮವಾಗಿಹೋಗಿದೆ.
ಈ ಹಾಸ್ಯಾಸ್ಪದ ಭಗವಂತ ಏನೂ ಕಾಣಿಸದ ಕುರುಡ.ಸಂಗೀತವೂ ಗೊತ್ತಿಲ್ಲದ
ಚಪ್ಪಟೆಕಿವಿಯ ಸರ್ವಾ ಂತರ್ಯಾಮಿ.ಪೆದ್ದುಪೆದ್ದಾಗಿ ಆಕಾಶದ ಅಗಲಕ್ಕೆ ಕುಂಡೆಯಾನಿಸಿ ಕೂತ
ಭಗವಂತ.ಮುಳ್ಳು ಕಂಟಿಯ ತುದಿಗೆ ಬೆಳಕ ತುರಿಸುತ್ತ ಕುಳಿತ ಮಿಂಚುಹುಳ ಈ ಭಗವಂತ.
ಎಲ್ಲವನು ಅರಿತ ಅಲ್ಲಾಡುವ ಶಿಖೆಯ ಆನಂದ ಕಂದ ತುಂದಿಲ ಕಂದ.ಆಕಾಶದಲ್ಲೂ ತುಂಬಿ
ಆತ್ಮದೊಳಗೂ ಹರಿದು ಹೇಗೆ ಹರಸುವುದು ಎಂದು ಹಲುಬುತ್ತಿದ್ದಾನೆ.
ಈ ಹೆಂಗಸರು ಈಗ ಭಂಗಿ ಬದಲಿಸುತ್ತಿದ್ದಾರೆ. ಹುಚ್ಚು ಕೆದರಿದ್ದವರು, ಭಕ್ತಿ ತುಂಬಿದ್ದವರು
ಒಂದರೆಗಳಿಗೆ ತಡೆದು ನೀರು ಕುಡಿದು ,ಹಾಲೂಡಿಸಿ,ಕೈಕಾಲುಬೆರಳುಗಳ ನೆಟಿಗೆ ಮುರಿದು,
ಕೆದರಿದ್ದ ಮುಡಿಯ ಮತ್ತೆ ವೈಯಾರದಲಿ ಬಿಗಿದು,ಮತ್ತೆ ಕದಡಿ
ಇನ್ನೊಂದು ಆರ್ತ ಆಲಾಪಕ್ಕೆ ಸಿದ್ದರಾಗುತ್ತಿದ್ದಾರೆ.
ಎಲ್ಲವೂ ನಿಜ,ಹಸಿ.ಎಲ್ಲವೂ ದೂರ ಭಗವಂತನಂತೆ ಮತ್ತು ಅವನ ಸೈನಿಕ ಸಂತರಂತೆ
ಇರುವ ಭಕ್ತಿಯ ಮಾರ್ಗ-ಹುಚ್ಚು ಹಳವಂಡ-ಇದು ಮಾತ್ರ ಈ ಅಮವಾಸೆಯ ಕತ್ತಲಲ್ಲಿ ನಿಜ
ಉಳಿದದ್ದು ಸುಳ್ಳು,ವ್ಯಭಿಚಾರ ಮತ್ತು ಕೈಗೆ ಎಟುಕುವಂತದ್ದು.
ನಾನು ದಣಿದು ನೋಡುತ್ತಿದ್ದೇನೆ......
ಈ ಹೆಂಗಸರೂ ಇಲ್ಲದ,ಭಗವಂತನೂ ಅಲ್ಲದ
ಮಕ್ಕಳೂ ಕೈಗೆ ಸಿಗದ ಈ ಟೊಳ್ಳು ಬಿಸಿಲಿನಲ್ಲಿ
ಮಿದುಳೊಳಗೆ ಬೆಳದಿಂಗಳು ಮತ್ತು ಹುಚ್ಚು ನಗು
ಸುಮ್ಮನೇ ನೋಡುತ್ತಿದ್ದೇನೆ
ಚೀತ್ಕರಿಸುತ್ತಿರುವ ಹೆಂಗಸರ ಹಾಹಾಕಾರದ ನಡುವೆ ಹೊಮ್ಮುತ್ತಿರುವ
ಹಭೆಯ ನಡುವೆ ಎದ್ದು ನಿಂತಿರುವ ಭಗವಂತ.
ನಾನು ನೋಡುತ್ತಿದ್ದೇನೆ. ಆತ ಎಲ್ಲವ ಕಾಣುತ್ತಿದ್ದಾನೆ.
ಕನ್ನಡದ ಅಪರೂಪದ ಸಂಕೋಚದ ಕವಿ ಎಚ್. ಗೋವಿಂದಯ್ಯನವರಿಗೆ ಪೂಸಿ ಹೊಡೆದು ಎರಡು  ಕವಿತೆಗಳನ್ನು ಓದಿಸಿದೆ.
<object width='425' height='350'><param name='movie' value='http://www.youtube.com/v/2NkT7tmMcRc'></param><param name='wmode' value='transparent'></param><embed src='http://www.youtube.com/v/2NkT7tmMcRc&rel=0' type='application/x-shockwave-flash' wmode='transparent' width='425' height='350'></embed></object>
ಇನ್ನೊಂದು ಕವಿತೆ `ಮಾರ '
<object width='425' height='350'><param name='movie' value='http://www.youtube.com/v/4nQVox0xbgY'></param><param name='wmode' value='transparent'></param><embed src='http://www.youtube.com/v/4nQVox0xbgY&rel=0' type='application/x-shockwave-flash' wmode='transparent' width='425' height='350'></embed></object>
ನಿನ್ನ ಬೆವರಿಕೊಂಡಿರಬಹುದಾದ ಎದೆ
ಮತ್ತು  ನಿನ್ನ ಕಾಲ ಬೆರಳ ಉಗುರಲ್ಲಿ ಕಡಲಿನ ಮರಳು
ಮತ್ತು ನಿನ್ನ ಮುಂಗುರುಳಲ್ಲಿ ಸಿಕ್ಕಿಕೊಂಡಿರುವ ಹಕ್ಕಿಯ ಗರಿ
ನೀನೇ ನಿದ್ದೆಯಲ್ಲಿ ಪರಚಿಕೊಂಡಿರುವ ನಿನ್ನ ಬೆನ್ನ ಗೀರು
ಮತ್ತು ಇದು ಯಾವುದಕ್ಕೂ ಕಾರಣನಲ್ಲನೆಂಬ ನನ್ನ ಕೊರಗು.
ನಿನ್ನ ಎಚ್ಚ್ರರದ ಉದಾಸೀನ, ಮೈಮುರಿದುಕೊಳ್ಳುವ ನಿನ್ನ ಬೆನ್ನ ಬೆರಳ  ಲಾಸ್ಯ,
ಮತ್ತು ಇಷ್ಟಿಷ್ಟೇ ಬಿಟ್ಟು  ಹಿಂದಿಡಿದಿಟ್ಟುಕೊಳ್ಳುವ ನಿನ್ನ ಔಧಾರ್ಯ ಮತ್ತು
ನನ್ನ ಮುಡಿಯಲ್ಲಿ ಬೆರಳಿಟ್ಟು ನಿದ್ದೆ ಮಾಡಿಸಬಹುದೆನ್ನುವ
ನಿನ್ನ ಮರುಳು ಧೈರ್ಯ!
ನಾನು ಏನೋ ತೊದಲುವೆನು, ಮತ್ತೆ ನಿದ್ದೆ ಹೋಗುವೆನು
ಎಲ್ಲವನು ಕಂಡು ಇಲ್ಲವಾಗುವೆನು
ಇರುವುದೇ ಎಲ್ಲವು ಎಂದು ಮುಟ್ಟಿ ನೋಡುವೆನು
ನಿನ್ನ ದೂರ ಕಳಿಸಿ ಬಿಟ್ಟು ಬಂದು....
[ಚಿತ್ರ:ಚರಿತಾ]
ಹೇ ಬಂದೇ ನವಾಜ್
ಈ ವಿಷವನ್ನು ಪೇಯದಂತೆ ಕುಡಿಯಲು ಬಿಡು,
ಒಂದು ತೊಟ್ಟೂ ನೆಲದಲ್ಲಿ ಹಿಂಗದಂತೆ.
ಈಗಿಂದೀಗಲೇ ಬಿಕ್ಷೆಯ ಬಟ್ಟಲನ್ನು ಹಿಡಿದು ನಡೆವ ಧೈರ್ಯ ಕೊಡು.ಈ ಗಿಡುಗನ ಉಡುಪನ್ನು ಕಳಚಿ ಬಿಡುವೆನು
ಪಾರಿವಾಳದ ದಿರಿಸನ್ನು ತೊಡಿಸು ನನಗೆ ಹೇ ಬಂದೇನವಾಜ್.
ನಿನ್ನ ಪಹಾಡಿನ ಹರಳು, ನಿನ್ನ ವನದ ಸಂಪಿಗೆಯ ಕರಿಯ ಬೀಜ,
ನಿನ್ನ ಫಕೀರರ ಹಾಡು,ಚಿಲುಮೆಯ ಹೊಗೆ,ಕೈಯ ಕೋಳ, ಕಾಲ ಕಡಗ,
ನಿನ್ನ ಹತ್ತೂ ಬೆರಳಿನ ಮಾಯದುಂಗುರ -
ನನ್ನ ಇಲ್ಲದಂತಾಗಿಸು ಹೇ ಬಂದೇ ನವಾಜ್.
ನಿನ್ನ ಗೋರಿಗಳ ನಡುವೆ ಹಾಲು ಊಡುತ್ತ,ಕಾಲು ಆಡಿಸುತ್ತ ಮಲಗಿರುವ ಮಗುವಿನ ನಗು.
ಹಾಲ ಊಡಿಸುತ್ತಿರುವ ಮುಸುಕಿನೊಳಗಿನ ಕಣ್ಣುಗಳ ಕಳ್ಳ ಆಟ.
ನಿನ್ನ ಗೋಡೆಗಳಿಗೆ ತಲೆ ಘಟ್ಟಿಸಿಕೊಳ್ಳುತ್ತಿರುವ ತಲೆಕೆಟ್ಟ ಹೆಣ್ಣುಮಗಳ ಚೀತ್ಕಾರ.
ಈ ಸ್ಮಶಾನದ ಆನಂದವನ್ನು ಅನುಭವಿಸಲು ಬಿಡು, ಹೇ ಬಂದೇ ನವಾಜ್.
ಈಗಿಂದೀಗಲೇ ಬಿಕ್ಷಾಪಾತ್ರವನ್ನು ಹಿಡಿದು ನಡೆವ ಧೈರ್ಯ ಕೊಡು.
ಕನಸಲ್ಲಿ ನಿನ್ನ ಖರಪುಟಗಳ ಸದ್ದು,ಆಕಾಶದಲ್ಲಿ ಹಾಹಾಕಾರ,
ಒಡೆದಕಾಲುಗಳ ಸವರುತಿರುವ ಎಳ್ಳು ಹೂವುಗಳ ಪರಾಗ,ನಸುನಗು,ಕದ್ದು ಕೂಡಿರುವ ಜವ್ವನಿಗರ
ಪಿಸುಮಾತು,ಎಲ್ಲಿಂದಲೋ ಎದ್ದು ನಿಂತಿರುವ ಅರೆ ಕಳಾಹೀನ ಚಂದ್ರ,
ಈಗ ತಾನೇ ಮೈಕೊಟ್ಟು ಬಂದಿರುವ ವಕ್ರಮೂಗಿನ ಬಿಕ್ಷುಕಿಯಮಿಂಚುತಿರುವ ಮೂಗ ನತ್ತು-
ನಾ ಪರಾದೀನ.ನಿನ್ನ ಪಾದಗಳಲಿ ಹಣೆಯಿಟ್ಟು ಚುಂಬಿಸುತಿರುವೆ ನನ್ನನೇ ನಾನು.
ಈ ಆನಂದವನು ನನ್ನೊಳಗೂ ಹರಿದು,ಹೊರಗೂ ಇಳಿದು,
ಈ ಅರೆ ಚಂದ್ರ ಇರುಳು ಈ ನಕ್ಷತ್ರ ರಾತ್ರಿ,ಈ ಮಿಂಚಿಲ್ಲದ ಸದ್ದಿಲ್ಲದ ಆಗಸದಲ್ಲಿ ತೋರಿಸು ನಿನ್ನ ಇರವು
ನಿನ್ನ ಗಾಳಿ ನಿನ್ನ ಬೆಳಕು,ನಿನ್ನ ಊರಿದ ಪಾದದ ಕೆಳಗೆ ಅಗಾಧಮುಳ್ಳಿನ ಪಾದುಕೆ ಈ ಭೂಮಿ.
ನಿನ್ನ ಶಹರಿನ ಬೀದಿಗಳಲ್ಲಿ ಅನವರತ ಅಲೆಯುವ ಪ್ರೇತಾತ್ಮರು ನಿನ್ನ ಸಖಿಯರು
ಬೊಗಸೆಯಲ್ಲಿ ಹರಿವ ಬೆಂಕಿ, ಚೆಲುವ ಚೆಲ್ಲುತ್ತ ಹಸಿಯ ಮಾಂಸ ನೆತ್ತರು ಹೊತ್ತು ನಡೆಯುತ್ತಿರುವಈ ಚೆಲುವೆಯರು.ಆಹಾ ಇವರ ಕಣ್ಣುಗಳು.ಇವರ ಗಾಢ ಬೆವರು.
ನಿನ್ನ ಮಣ್ಣ ಹಿಡಿ ದೂಳ ಕದಲಿಸದೆಚಲಿಸುತ್ತಿರುವ ಇವರ ಪಾದ ಪಕ್ಷಿಗಳು.
ಕಣ್ಣಿಂದ ಕಾಣಿಸುತ್ತಿರುವ ಎಲ್ಲವ ಇಲ್ಲದಂತಾಗಿಸು ಹೇ ಗೇಸುದರಾಜ್
ನಾ  ಇಲ್ಲಿಂದ ಹೋಗುತಿರುವೆನು,
ಇಲ್ಲದ ಆ ಇನ್ನೊಂದು ಶಹರಿನ ದಾರಿ ತೋರಿಸು,
ಹೇ ಬಂದೇ ನವಾಜ್.
ಕ್ಷಮಿಸು,
ಕ್ಷಮಿಸು, ನಿನ್ನನ್ನು ಹಾಗೆ ಬಗ್ಗಿಸಬೇಕಾಗಿರಲಿಲ್ಲ
ಮತ್ತು ಹಾಗೆ ಮಖಾಡೆ ಮಲಗಿಸಿದ್ದೂ ತಪ್ಪಾಯ್ತು.
ನಿನ್ನ ಎದೆ,ಹೊಕ್ಕಳು,ನಿನ್ನ ಕಿಬ್ಬೊಟ್ಟೆ, ತೊಡೆ...
ನಿನ್ನ ಎಲ್ಲವನ್ನೂ ತಿಂದು ತೇಗಿದ್ದಾಯ್ತು. ಪರಮಾತ್ಮ!
ಇನ್ನು ಏನಂತಲೂ ಪರದಾಡಿ ಮುಗಿಯಿತು.
ಈಗಲಾದರೂ ಕಣ್ಣು ತೆರೆ, ಹೇಳು,
ಉಡುಪು ತೊಟ್ಟುಕೋ.
ಮಡಿಲಲ್ಲಿ ಕೂರು.ತುಟಿ ಒರೆಸಿ ಮಾತನಾಡು.
ಮುಗಿಯಿತೇ ಅಂತಾದರೂ ಕೇಳು.
ಸುಮ್ಮಗೆ ನಗದಿರು.
-೧-
ಇನ್ನು ಯಾವತ್ತು..... ..
[ಚಿತ್ರಗಳು:ಚರಿತಾ]
ಇನ್ನು ಯಾವತ್ತು ಆ ಕಾರುಣ್ಯ ಮತ್ತೆ
ಎತ್ತಿಕೊಳ್ಳುವುದು?
ಯಾವತ್ತು ಇನ್ನು ಆ ಬರವು
ಒನಪಿಲ್ಲದೆಯೇ ಯಾವ ವಾಸನೆಯೂ ಇಲ್ಲದೆ
ಮಂತ್ರ ಮುಗ್ಧ ಗೊಳಿಸುವುದು ಬರಿಯ ಕೇವಲ
ಒಂದು ಅಂಗುಲ ನಗೆಯಿಂದಲೆಯೇ ಯಾವತ್ತು
ನಾನು ನನ್ನ ನಖಗಳ ಮರೆತು ಮುಳುಗುವ ಜಗವ
ನೋಡುವುದು ಇನ್ನು ಯಾವತ್ತು
ಆ ಕಾರುಣ್ಯ ಮರಳಿ ಬರುವುದು?
-೨-
ಬೇಕಿರಲಿಲ್ಲ
ಬೇಕಿರಲಿಲ್ಲ
ನಮ್ಮ ನಡುವೆ ಪದಗಳು ಮಾತನಾಡುವುದು
ಮತ್ತು ಮಾತುಗಳು ಅಡಗಲು ಹವಣಿಸುವುದು.
ಕಳೆದದ್ದು ಇರುವುದು ಮತ್ತು ನಡೆಯಲಿರುವುದು
ಸನ್ನೆಗಳಲಿ ಅರಿವಾಗುವುದು.
ಬೇಕಿರಲಿಲ್ಲಇದು ಯಾವುದೂ.
ಇದ್ದಿದ್ದರೆ ಒಂದು ಒದ್ದೆಯ ಹಿಮದ ಮಣಿಯ
ಗಾಳಿ ಆಡಲುನಾಚುವ, ಘನ ಗಂಬೀರ ಕಡಲೂ ನಗುವ
ನಾವು ಒಮ್ಮೆ ಕುಳಿತಿದ್ದಂತಹ ಜಾರುವ ಜಾಗ,
ಬೇಕಿರಲಿಲ್ಲಇದು ಯಾವುದೂ.....
ನಿನ್ನ ವಾಸನೆ ಸೂಸಲಿ ಈ ಚಾದರದಲ್ಲಿ......
ನಿನ್ನ ಮೈವಾಸನೆ ಸೂಸಲಿ ಈ ಚಾದರದಲ್ಲಿ
ನೆನಪೆಂಬುದು ಬೇಡ ಇರುವಾಗಲೇ...
ಹಾಗೆ ನೋಡಿದರೆ ನಾವು ಕೂಡಿದ್ದೇ ಇಲ್ಲ
ಕಂಡೇ ಇಲ್ಲ.ಎಣಿಸಿದ್ದು ಮಾತ್ರ
ಏನೆಲ್ಲಾ ನಡೆಸಿರುವೆವೆಂದು.
ನೀನು ಬೆಳಕ ಪುತ್ಥಳಿ,ಒಂದು ಅನನ್ಯ ಪರಿಮಳ,
ಬೆಳಗೇ ತಲೆಕೆಳಗೆ ಬಿದ್ದ ಪಾರಿಜಾತ.
ನೀನು ನಕ್ಷತ್ರಮುಖಿ ಕೋಲು ಬೆಳಕು
ಮೈಯ್ಯ ಕತ್ತಲೊಳಕ್ಕೆ ಬಾಚಿ ಎಳೆದು ನನ್ನ ಕಣ್ಣ ಮುಚ್ಚಿದವಳು.
ಮಲೆಯ ಒರತೆಯಂತವಳು.
ನಿನ್ನ ಮೈ ವಾಸನೆ ಸೂಸಲಿ ಈ ಚಾದರದಲ್ಲಿ.
ನೆನಪೆಂಬುದು ಯಾಕೆ ಇರುವಾಗಲೇ.
ಜಿನುಗು ಜಿನುಗುತ್ತಲೇ ಸುಖ ಸಂಕಟ
ಇನ್ನು ಇನ್ನೇನೋ ಗೊತ್ತಿಲ್ಲದ ಸದ್ದ ಅದುಮಿ ಹಿಡಿದವಳು.
ನೀನು ಕಳ್ಳಗುಟ್ಟಿನ ಹೆಣ್ಣು, ಹೆತ್ತ ಎದೆಯವಳು
ಚೂಟಾಟದ ಹುಡುಗಿ, ನಡುವೆ ಎದ್ದು ಮೈ ಕೊಡವಿ
ಮತ್ತೆ ಅಣಿಯಾದವಳು.
ಏನೂ ಗೊತ್ತಿಲ್ಲ ಎಂದವಳು,
ಎಷ್ಟೆಲ್ಲ ಕಲಿಸಿ.
ನಿನ್ನ ಮೈ ವಾಸನೆ ಸೂಸಲಿ ಈ ಚಾದರದಲ್ಲಿ
ನೆನಪೆಂಬುದು ಯಾಕೆ ನಾವು ಇರುವಾಗಲೇ.
ಹಸುವಿನಂತಹ...
ಹಾಲು ಕರೆಯುವ ಹಸುವಿನಂತಹ ಹಾದರಗಿತ್ತಿ
ಮುದುಕಿ,ಹೆಂಗಸು,ಹತ್ತಿರಕ್ಕೆ ಇನ್ನೂ ಹುಡುಗಿ
ಅರೆ ಸೀರೆ ಮೊಣಕಾಲಿಗೆ ಎತ್ತಿ
ಆಕಳ ಅವುಡಿಗೆ ತಾಡನ ನಡೆಸಿದ್ದಾಳೆ ಹುಚ್ಚಿ
ಕಂದು ಆಕಳ ಹಿಂಬದಿ ಕಂಡು ಕಣ್ಣುಮುಚ್ಚುತ್ತಾಳೆ
ಗಂಡಸಿನಂತಹ ತನ್ನಬಾಲವ ತಾನೇ ನೆಕ್ಕುವ
ತಾನೇ ಹಾಲು ಎಳಕೊಳ್ಳುವ, ಬಿಡುವ
ಅದರ ಕೊರಳ ವಿಟನಂತೆ ಸವರುತ್ತಾಳೆ
ಎಷ್ಟೋ ಮಾಡಿ ಮುಗಿಸಿ ಬೇಡವೆಂದು ಅಂಡು ನೆಲಕ್ಕೆ
ಊರಿ ಕುಂತ ಸುಂಟರಗಾಳಿ.
ಅವಳ ಮೊಲೆಗಳು ಬಿರಿದದ್ದು,ಬೆಳೆದದ್ದು,ಹಾದಿಹೋಕರ
ಹೊಟ್ಟೆ ಉರಿಸಿದ್ದು ಈಗ ಒಣಗಿದ ಎಳ್ಳಂತೆ ಕಡುವಾಗಿದೆ
ಕಡು ನೀಲ ಆಕಾಶಕ್ಕೆ ತಿಳಿನೀಲ ಮೋಡದಂತೆ
ಅವಳ ತೋಳ ನರಬಳ್ಳಿಗಳು ತಬ್ಬಿದೆ.
ಅವಳ ಬಿಗಿದುಕೊಂಡಿದ್ದ ತೊಡೆಗಳು ಸಡಿಲವಾಗುತ್ತಾ
ಸ್ನಾಯುವಾಗುತ್ತಾ ಒಂದಕ್ಕೊಂದು ಮುಟ್ಟಿ
ಮರದ ಜೀವಂತ ಗ್ರಾಮ ದೇವತೆಯಂತೆ
ಕೂತಿದ್ದಾಳೆ ಆಕಳ ಮುಂದೆ,
ಕಾಯಲು ಹೇಳುತ್ತಿದ್ದಾಳೆ ಈ ಹಳೆಯ ಹಾದರದ ಹೆಂಗಸು
ಆಕಳೊಡನೆ ಮಾತು ಆಡಿ.
ಅವಳ ಗ್ರಾಮಕ್ಕಿರುವ ಆಕಾಶ ಅವಳು
ಮತ್ತೆಲ್ಲ ಬರಿಯ ಜನರು,ಜನರೆಂದರೆ
ಬರಿಯ ಗಂಡಸರು.
ಉಟ್ಟದ್ದನ್ನು ಉರಿಗೆ ಎಸೆದೆವೆಂದು
ಕಂಕುಳಲ್ಲಿ ಬೆವರು ಸೂಸುವ ಬರಿಯ
ಹುಡುಗರು.ಗಂಡಸರಂತೆ
ಗರ್ವ ಉಳ್ಳವರು.
ಹಾದರವನು ಆಶೆ ಪಡುವರು
ಕಂಡೊಡನೆ ಪೋಲಿ ಮಾತುಗಳ ಹೇಳಿರಮಿಸಿ
ಮುಖ ಸೆಟೆಸಿ ಹೋಗುವರು,ಅಯ್ಯೋ
ಮಕ್ಕಳಂತಹ ಗಂಡು ಆಡುಗಳು.
ಪೇರಲೆಯ ಗೆಲ್ಲುಗಳಂತಹ ಅವಳ ತೋಳುಗಳು ಬಾಗಿ
ಪೇಲವವಾಗಿ..ಆದರೂ ಆಸೆ ಪಡುವರು ಅವಳನ್ನು
ಹುಳಹರಿದ ಹಣ್ಣಂತಹ ಅವಳ ತುಟಿಗಳ ಗಾಯಮಾಡಿ
ಅವಳತೋಳುಗಳಎತ್ತಿ ಗೇರಸಾರಾಯಿಯಂತಹ
ಬೆವರಸೆಲೆ ದಾರಿಯಲ್ಲೆಲ್ಲ ಮನಸನೋಡಿಸುವರು
ಹೆದ್ದಾರಿಯ ಅರಿಯದ ಲಾರಿ ಚಾಲಕರೂ ಸೇರಿ.
ಅವಳ ಕಣ್ಣುಗಳಲ್ಲಿ ಆಕಾಶವಿದೆ..ಅವಳ ಬಾಗಿದ ಬೆನ್ನಿಗೆ
ಆಕಳ ಕಂದು ಬಂದಿದೆ ಸಂಜೆಯಾದಂತೆ
ಅವಳ ಗ್ರಾಮಕ್ಕೊಬ್ಬಳೇ ಅವಳು ಎಂಥ ಹಾಯುವ
ಗೊಣಗುವ ಆಕಳ ಮೊಲೆಯಲ್ಲೂ ಹಾಲ ಬರಿಸುವವಳು
ನಾವು ಎಲ್ಲರೂ
ನೀವು ಇದ್ದಿದ್ದರೆ
ಈ ಎಲ್ಲದರ ಕುರಿತು
ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದಿರಿ ಎಂದು
ಯೋಚಿಸುತ್ತಾ ಕುಳಿತಿರುವೆವು.
ಹೀಗೆ ನೀವು ಸಾರ್ವಜನಿಕ ತೀರ್ಮಾನಗಳನ್ನು
ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಬಹುಶಃ
ನಮಗೆ ಗೊತ್ತಿಲ್ಲ ಎನ್ನುವುದೂ ಒಂದು
ನಿಮ್ಮ ಬಕ್ಕತಲೆಯ ಒಳಗೆ ಸುಳಿದಾಡುತ್ತಿದ್ದ
ಮಿಂಚುಗಳು,ಅಳ್ಳೆದೆಯವರ ಮೇಲೆ ಸದಾ ಮಸೆಯುತ್ತಿದ್ದ ಸೃಜನಶೀಲ
ಮಚ್ಚು ಮತ್ತು ಎಲ್ಲ ಸುಂದರಿಯರ ಬೆವರಸೆಲೆ
ಹುಡುಕಿಕೊಂಡು ಅಂಡಲೆಯುತ್ತಿದ್ದ
ಮಹಾನಾಚುಗೆಬುರುಕ ವಿಧ್ವತ್ತು.
ನಡೆಯುತ್ತಿರುವುದು ಸದಾ ತಂತಿಯ ಮೇಲೆಂಬ
ದೊಂಬರ ಹುಡುಗಿಯ
ವಿನಾಕಾರಣ ಆಪತ್ತಿನ ಭಯ,ಅದಕ್ಕೂ ಮಿಗಿಲಾಗಿದ್ದ
ಅವ್ವನಂತಹ ಮೊಸರು ಮಾರುವ ನಿಯತ್ತು.
ನಾಚುಗೆಯ,ಲೆಕ್ಕಾಚಾರದ,ಪತರಗುಟ್ಟುವ,
ಕವಿತೆಯ,ಗದ್ಯದ,ಬೈಗುಳಗಳ
ಈ ಎಲ್ಲದರ ತಳದಲ್ಲಿ ಉಳಿಯುವ
ಅಲ್ಲೋಲಕಲ್ಲೋಲದಂತಹ ಏಕಾಂತದ ನಡುವೆಯೂ
ನೀವು ನೀಡುತ್ತಿದ್ದ ಕಠಿಣ ಏಟು.
ಅವುಗಳನು ಉಂಡೂ ಸುಖಿಸುತ್ತಿದ್ದ
ಮಹಾ ಪೋಕರಿ ಸಾಮಾಜಿಕ ಮನಸ್ಸು.
ಹಾದರದವಳ ಮಹಾ ಲೆಕ್ಕಾಚಾರ
ಮತ್ತು ಗರತಿಯ ಹುಚ್ಚುಕೋಡಿ ಮನಸ್ಸು
ಲಂಕೇಶ್ ನೀವು ಇದ್ದಿದ್ದರೆ ಕೌದಿಯೊಳಗೆ ಸದಾ
ತಾಪದಿಂದ ಕಾತರಿಸುತ್ತಿದ್ದ ನಿಮಗೆ ಬಹಳಷ್ಟು ಕಥೆಕಟ್ಟಿ
ಹೇಳ ಬಹುದಿತ್ತು.ಮತ್ತು ಬಹಳಷ್ಟು ಕೇಳಬಹುದಿತ್ತು
ಈ ಎಲ್ಲ ಬಿಕ್ಕಟ್ಟು ಯಾಕೆ ಬೇಕಿತ್ತು!
ಬಹುಶಃ ಈಗಿನ ಹುಡುಗರಿಗೆ ಶ್ರೀನಿವಾಸರಾಜು ಮೇಷ್ಟರು ಸಿಗಲಿಕ್ಕಿಲ್ಲ
ಮೇಷ್ಟರಿಗೆ ಹುಡುಗರೂ ಇರಲಿಕ್ಕಿಲ್ಲ
ಇದು ಹಳಹಳಿಕೆಯೆಂದೇನೂ ಅನಿಸಬೇಕಾಗಿಲ್ಲ
ಏಕೆಂದರೆ ಕವಿತೆ ಹುಚ್ಚು ಹಾದರಗಿತ್ತಿಯಂತಹ ಹೆಂಗಸು,
ವಿಟನಂತಹ ಬೇಜವಾಬ್ಧಾರಿಯ ಗಂಡಸು, ಹಾಗೆಲ್ಲಾ
ಮೇಷ್ಟರ ಪಾಲಾಗುವುದಿಲ್ಲ ಅಂತ ನಾವೆಲ್ಲ ಸಜ್ಜನರ ಕಾಲೆಳೆಯಬೇಕಾಗಿಲ್ಲ.
ಏಕೆಂದರೆ ಸಜ್ಜನರು ಈಗಲೂ ಕಾಲವಾಗಿಲ್ಲ.
ಬಹುಶಃ ಇದನ್ನು ಸಮೀಕರಣದ ಮೂಲಕ ಹೀಗೂ ಹೇಳಬಹುದು
'ಸುಮ್ಮನೇ ಮೇಷ್ಟರ ಕಾಲಬಳಿ ಕುಳಿತು ಅಥವಾ ಅವರ ಕೈ ತುತ್ತಿನಂತಹ
ವಾತ್ಸಲ್ಯ ಉಂಡು ಯಾಕೆ ಬೆನ್ನು ತಡವಿಸಿಕೊಂಡು ಬರಲಾಗುತ್ತಿಲ್ಲ'
ಮೇಷ್ಟರು ನಮ್ಮನ್ನು ಬೈಯ್ಯಬಹುದಿತ್ತು,ಕಿಚಾಯಿಸಬಹುದಿತ್ತು,
ವಿಮರ್ಶಿಸಬಹುದಿತ್ತು - ಹಾಗೇನೂ ಮಾಡಲಿಲ್ಲ
ಸುಮ್ಮನೇ ಸದ್ದು ಮಾಡದೇ ಸಪಾಟು ದಾರಿಯಲ್ಲಿ ನಡೆವಂತೆ ನಡೆದು
ಟೀ ಲೋಟ ಕೈಯಲ್ಲಿರುವಂತೆೆ ನಡೆದು
ಕವಿತೆ ಎದೆಯೊಳಗಿರುವಂತೆ ನಡೆದು
ಎಲ್ಲಿ ಹೆಜ್ಜೆ ಊರುವುದೋ ಎಂಬಂತೆ ನಡೆದು
ಪುಸ್ತಕಗಳ ಪ್ರಕಾಶಿಸಿದರು
ನನ್ನಂತಹ ಅರಿವುಗೆಟ್ಟವನ ಕವಿಯನ್ನಾಗಿಸಿದರು
ಒಮ್ಮೆ ಮೇಷ್ಟರಿಗೆ ನಮಸ್ಕಾರ ಮಾಡಲು ಮರೆತು ನನಗೆ ನನ್ನನ್ನೇ ಒದೆಯಬೇಕೆನ್ನಿಸಿತ್ತು
ಆಮೇಲೆ ಎಲ್ಲೋ ಹೊಳೆಯ ಬದಿಯಲ್ಲಿ ನನಗೆ ಅವಳು ಸಿಲುಕಿ ನನ್ನ ನಾಲಗೆಯಲ್ಲಿ ನೆತ್ತರು ಜಿನುಗಿ ಅವಳ ಎದೆ ಹೊಟ್ಟೆ ಬೆನ್ನು ಕುಂಡೆಯಲ್ಲೆಲ್ಲಾ ಉಣ್ಣೆಹುಳಗಳು ಕಚ್ಚಿ ರಂಪಾಟವಾಡಿ ಆಮೇಲೆ ಅದೇ ಸಖತ್ತಾಗಿ ಕವಿತೆಯಾಗಿ ಅದಕ್ಕೆ ಮೇಷ್ಟರು ಬಹುಮಾನವೂ ಕೊಟ್ಟು  ಅದು ಹಾಗಲ್ಲ ಹಾಗಲ್ಲ ಎಂದು ಹಲ್ಲು ಕಚ್ಚಿಕೊಂಡಿದ್ದೆ
ಆಗಲೂ ಶ್ರೀನಿವಾಸರಾಜು ಮೇಷ್ಟರು ಮಗುವಿನ ಹಾಗೆ ನಗುತ್ತಿದ್ದರು
ಈಗಲೂ ನಗುತ್ತಿರುತ್ತಾರೆ.
ಅವರ ಮನೆಯೆದುರಿನ ಮಲ್ಲಿಗೆ ಬಳ್ಳಿ
ಕಾಮದೇನುವಿನ ಪರಿಮಳ!
ಅವಳ ಕೆಚ್ಚಲಿನಿಂದ ಮುಖವ ಬಿಡಿಸಿಕೊಂಡು ಬೆಂಗಳೂರಿನ ಬಸ್ಸು ಹತ್ತಿ
ಕ್ರೈಸ್ಟ್ ಕಾಲೇಜಿನಿಂದ ಕವಿತೆಗೆ ಬಹುಮಾನ ಇಸಕೊಂಡು ಬರುವುದಿದೆಯಲ್ಲ
ಮೇಷ್ಟ್ರೆ ನೀವಿದ್ದರೆ  ಹುಡುಗರಿಗೆ ಹೀಗೆಲ್ಲ ಕಾವ್ಯದ ಹಾಗೆ
ಗಿರಕಿ ಹೊಡೆಯಲು ಆಗುತ್ತದೆ.
ನಿಮಗೆ ನಮಸ್ಕಾರ.